ಅರಿಕೇಸರಿ 2

ವೇಮುಲವಾಡದ ಚಾಲುಕ್ಯ ಶಾಖೆಯಲ್ಲಿನ ಮೂವರು ಅರಿಕೇಸರಿಗಳಲ್ಲಿ ಎರಡನೆಯ  ಅರಿಕೇಸರಿ ಆ ವಂಶದಲ್ಲೇ  ಪ್ರಖ್ಯಾತ, ಪರಾಕ್ರಮಿ, ಅಲ್ಲದೆ ಪಂಪಮಹಾಕವಿಗೆ ಆಶ್ರಯದಾತನಾಗಿದ್ದವ. ಹೀಗೆ ಚರಿತ್ರೆ ಮತ್ತು ಸಾಹಿತ್ಯ(ಈ ಎರಡು ದೃಷ್ಟಿಯಿಂದಲೂ ಈತನ ವಿಷಯ ಮುಖ್ಯವೆನಿಸುತ್ತದೆ.

ಕನ್ನಡನಾಡಿನ ಚರಿತ್ರೆಯಲ್ಲಿ ಬಾದಾಮಿಯ ಚಾಲುಕ್ಯರು, ಕಲ್ಯಾಣಿಯ ಚಾಲುಕ್ಯರು, ವೆಂಗಿಯ ಚಾಲುಕ್ಯರು ಮತ್ತು ಗುಜರಾತಿನ ಚಾಲುಕ್ಯರು ಎಂಬುದಾಗಿ ನಾಲ್ಕು ಮುಖ್ಯ ಚಾಲುಕ್ಯ ಮನೆತನಗಳು ಪ್ರಸಿದ್ಧವಾಗಿವೆ. ಇವಲ್ಲದೆ ಇನ್ನೂ ಕೆಲವು ಚಾಲುಕ್ಯ ಶಾಖೆಗಳಿವೆ. ಅವುಗಳಲ್ಲಿ ಒಂದು ವೇಮುಲವಾಡದ ಚಾಲುಕ್ಯ ಶಾಖೆ. ಈ ಶಾಖೆಯ ಅರಸರು ಕ್ರಿ.ಶ.7-8ನೆಯ ಶತಮಾನದಿಂದ ಹಿಡಿದು 10ನೆಯ ಶತಮಾನದವರೆಗೆ ಇಂದಿನ ಆಂಧ್ರಪ್ರದೇಶದ ನಿಜಾóಮಾಬಾದ್ ಕರೀಂನಗರ್ ನಲ್ಗೊಂಡ ಮತ್ತು ಮೈಸೂರಿನ ರಾಯಚೂರು ಜಿಲ್ಲೆಗಳನ್ನು ಬಹುಮಟ್ಟಿಗೆ ಒಳಗೊಂಡ ಪ್ರದೇಶದಲ್ಲಿ ರಾಷ್ಟ್ರಕೂಟದ ಅಧೀನತೆಯಲ್ಲಿ ರಾಜ್ಯವಾಳುತ್ತಿದ್ದರು. ಇಂದಿನ ಅಂಧ್ರಪ್ರದೇಶದ ಕರೀಂನಗರ್ ಜಿಲ್ಲೆಯ ವೇಮುಲವಾಡವೇ (ಲೇಮುಲವಡ) ಅಂದು ಲೆಂಬುಳಪಾಟಿಕವೆಂಬ (ವೆಂಬುಳವಾಟಕಪತ್ತನ/ವೆಂಬುಳವಾಟ) ಹೆಸರಿಂದ ಅವರ ರಾಜದಾನಿಯಾಗಿತ್ತು. ಈ ಕಾರಣವಾಗಿಯೇ ಇವರನ್ನು ವೇಮುಲವಾಡದ ಚಾಲುಕ್ಯರು ಎಂಬುದಾಗಿ ಕರೆಯುವುದು ರೂಢಿಯಾಗಿದೆ. ಈ ಮನೆತನದ ಮೂಲಪುರುಷ ಒಂದನೆಯ ಯುದ್ಧಮಲ್ಲ ವಿನಯಾದಿತ್ಯ. ಈತ ಇಮ್ಮಡಿ ಪುಲಿಕೇಶಿಯ ಪುತ್ರರಲ್ಲಿ ಲಾಟದ ಜಯಸಿಂಹಧಾರಾಶ್ರಯನ ಮಗನಿರಬೇಕೆಂದು ಕೆಲವರೂ ಪೃಥುವಿಕ್ರಮ ರಾಜಾದಿತ್ಯನೆನ್ನಿಸಿದ ಬಾದಾಮಿಯ ಒಂದನೆಯ ವಿಕ್ರಮಾದಿತ್ಯನ ಮಗನಿರಬೇಕೆಂದು ಕೆಲವರು ವಾದಿಸಿರುತ್ತಾರೆ. ಹೀಗೆ ವೇಮುಲವಾಡದ ಚಾಲುಕ್ಯರು ಆದಿಯ ಬಾದಾಮಿಯ ಚಾಲುಕ್ಯ ಮನೆತನಕ್ಕೆ ಸೇರಿದವರೇ ಆದರೂ ಆ ಸಂಬಂಧವನ್ನು ಇನ್ನೂ ಸರ್ವಸಮ್ಮತವಾಗಿ ಗುರುತಿಸುವುದು ಸಾಧ್ಯವಾಗಿಲ್ಲ.

ಈ ಚಾಲುಕ್ಯಶಾಖೆಯ ಅರಸರಾದ ಒಂದನೆಯ ಅರಿಕೇಸರಿಯ ಕೊಲ್ಲಿಪಾರದ ತಾಮ್ರಪಟಗಳು (ಸು.750), 2ನೆಯ ಅರಿಕೇಸರಿಯ ವೇಮುಲವಾಡದ ಶಿಲಾಶಾಸನ(ಸು.927) ಮತ್ತು 3ನೆಯ ಅರಿಕೇಸರಿಯ ಪರಭಣಿಯ ತಾಮ್ರಪಟಗಳು (966)(ಇವುಗಳಿಂದಲೂ ಪಂಪಕವಿಯ ವಿಕ್ರಮಾರ್ಜುನ ವಿಜಯ (941) ಎಂಬ ಕನ್ನಡಕಾವ್ಯ ಹಾಗೂ ಸೋಮದೇವಸೂರಿಯನೆ ಯಶಸ್ತಿಲಕ ಚಂಪೂ (959) ಎಂಬ ಸಂಸ್ಕøತಕಾವ್ಯ(ಇವುಗಳಿಂದಲೂ ಆ ಮನೆತನದ ಅರಸರ ವಿಚಾರವಾಗಿ ಹಲವು ಚಾರಿತ್ರಕ ವಿವರಗಳು ಬೆಳಕಿಗೆ ಬಂದಿವೆ. ಇವುಗಳಿಂದ ತಿಳಿದುಬರುವ ಇವರ ವಂಶಾನುಕ್ರಮಣಿಕೆ ಹೀಗಿದೆ; ಯುದ್ಧಮಲ್ಲ ವಿನಯಾದಿತ್ಯ I(ಅರಿಕೇಸರಿ I( ನರಸಿಂಹ I ಮತ್ತು ಭದ್ರದೇವ I((ನರಸಿಂಹನ ಜ್ಯೇಷ್ಠಪುತ್ರ) ಯುದ್ಧಮಲ್ಲ II(ಭದ್ರದೇವ II(ಬದ್ದೆಗ) (ಯುದ್ಧಮಲ್ಲ III(ನರಸಿಂಹ II(ಅರಿಕೇಸರಿ II(ಭದ್ರದೇವ III(ಅರಿಕೇಸರಿ III. ಕೊಲ್ಲಿಪಾರದ ತಾಮ್ರಪಟಗಳಲ್ಲಿ ಮೊದಲು ನಾಲ್ಕು ತಲೆಗಳು ಹೆಚ್ಚಾಗಿವೆ.

ಇಮ್ಮಡಿ ಅರಿಕೇಸರಿಯ ವಿಚಾರವಾಗಿ ವೇಮುಲವಾಡ ಮತ್ತು ಪರಭಣಿ ಶಾಸನಗಳಲ್ಲಿಯೂ ಪಂಪನ ವಿಕ್ರಮಾರ್ಜುನ ವಿಜಯದಲ್ಲಿಯೂ (ಪಂಪಭಾರತ) ದೊರೆಯುವ ಕೆಲವು ಸಂಗತಿUಳನ್ನು ಚರಿತ್ರಕಾರರು ವಿಮರ್ಶಿಸಿರುತ್ತಾರೆ. ಅವನ್ನು ಇಲ್ಲಿ ಸಂಗ್ರಹಿಸಿದೆ. ಅರಿಕೇಸರಿ ಇಮ್ಮಡಿ ನರಸಿಂಹನಿಗೆ ಜಾಕವ್ವೆಯಲ್ಲಿ ಮಗನಾಗಿ ಜನಿಸಿದ. ಜಾಕ್ವವೆ ರಾಷ್ಟ್ರಕೂಟ ಚಕ್ರವರ್ತಿ 3ನೆಯ ಇಂದ್ರನ ಸೋದರಿಯಿರಬಹುದೆಂದು ಕೆಲವರ ಊಹೆ. ಪಂಪ 'ಎಂದ್ರೇಂದ್ರನ ತೋಳೆ ತೊಟ್ಟಿಲಗಿರೆ ಬಳೆದಂ' ಎಂಬುದಾಗಿ ಅರಿಕೇಸರಿಯ ಬಾಲ್ಯವನ್ನು ವರ್ಣಿಸಿರುವುದರಿಂದ, ಅರಿಕೇಸರಿ ಮುಮ್ಮಡಿ ಇಂದ್ರನ ಪ್ರೀತ್ಯಾದರಗಳಿಗೆ ಪಾತ್ರನಾಗಿದ್ದನೆಂದು ತಿಳಿದುಬಂದಿದೆ. ಆತ ಇಂದ್ರನ ಪುತ್ರಿ ರೇವಕನಿರ್ಮಡಿಯನ್ನು ವರಿಸಿದ್ದನೆಂಬುದಾಗಿ ವೇಮುಲವಾಡದ ಶಾಸನದಲ್ಲಿ ಹೇಳಿದೆ. ಆದರೆ ರಾಷ್ಟ್ರಕೂಟ ಕುಲದ ಲೋಕಾಂಬಿಕೆಯೆಂಬುವಳು ಪತ್ನಿ ಎಂಬುದಾಗ ಪರಭಣಿ ತಾಮ್ರಪಟಗಳಲ್ಲಿದೆ. ಲೋಕಾಂಬಿಕೆ ಎಂಬುದು ರೇವಕ ನಿರ್ಮಡಿಯ ಬಿರುದೇ ಪ್ರತಿನಾಮವೇ ಅಥವಾ ಇನ್ನೊಬ್ಬ ಹೆಂಡತಿಯ ಹೆಸರೇ ಎಂಬುದು ಸ್ಪಷ್ಟವಿಲ್ಲ.  ಕೆಲವು ಲೋಕಾಂಬಿಕೆಯೊಬ್ಬಳೇ ಅರಿಕೇಸರಿಯ ಪತ್ನಿಯೆನ್ನುತ್ತಾರೆ; ಮತ್ತೆ ಕೆಲವರು ಅತನಿಗೆ ರೇವನಕನಿರ್ಮಡಿ ಮತ್ತು ಲೋಕಾಂಬಿಕೆ ಇಬ್ಬರೂ ಪತ್ನಿಯರೆನ್ನುತ್ತಾರೆ. ಅರಿಕೇಸರಿಗೆ ಸಾಮಂತೋಚೂಡಾಮಣಿ, ಉದಾತ್ತ ನಾರಾಯಣ, ಅರೂಢ ಸರ್ವಜ್ಞ, ಕದನ ತ್ರಿಣೇತ್ರ, ಸಹಜಮನೋಜ, ಶರಣಾಗತ ಜಳನಿಧಿ, ಗುಣಾರ್ಣವ, ಪ್ರಿಯಗಳ್ಳ-ಮೊದಲಾದ ಹಲವು ಬಿರುದುಗಳಿದ್ದುವೆಂಬುದಾಗಿ ವೇಮುಲವಾಡದ ಶಾಸನದಿಂದಲೂ ವಿಕ್ರಮಾರ್ಜುನ ವಿಜಯದಿಂದಲೂ ತಿಳಿದುಬರುತ್ತದೆ.

ಅರಿಕೇಸರಿಯ ಸಾಹಸಗಳಲ್ಲಿ ಮೂರರ ಬಗೆಗೆ ಮಾತ್ರ ಉಲ್ಲೇಖಗಳು ದೊರೆಯುತ್ತವೆ. ರಾಷ್ಟ್ರಕೂಟ ಚಕ್ರವರ್ತಿ 4ನೆಯ ಗೋವಿಂದರಾಜ (ಗೊಜ್ಜಿಗ 928-33) ಚಾಲುಕ್ಯವಂಶದ ವಿಜಯಾದಿತ್ಯನ (ಬಿಜ್ಜ) ಮೇಲೆ ಮುಳಿಯಲು ಈ ಚಾಲುಕ್ಯರಾಜ ಅರಕೇಸರಿಗೆ ಶರಣುಹೋದನೆಂದೂ ಅರಿಕೇಸರಿ ಆತನಿಗೆ ರಕ್ಷಣೆ ನೀಡಿದನೆಂದೂ ವೇಮುಲವಾಡದ ಶಾಸನದಿಂದಲೂ  ವಿಕ್ರಮಾರ್ಜುನ ವಿಜಯದಿಂದಲೂ ತಿಳಿದುಬರುತ್ತದೆ. ಇದು ಮೊದಲನೆಯದು, ಚರಿತ್ರೆಕಾರರು ಈ ಪ್ರಸಂಗವನ್ನು ಹೀಗಿರಬಹುದೆಂದು ವಿವರಿಸಿರುತ್ತಾರೆ; ರಾಷ್ಟ್ರಕೂಟ ಚಕ್ರವರ್ತಿ 3ನೆಯ ಇಂದ್ರನ (ಸು. 914-22) ಆಳ್ವಿಕೆಯ ಕೊನೆಗೆ ವೆಂಗಿಯ ಚಾಲುಕ್ಯರಲ್ಲಿ ಅರಸೊತ್ತಿಗೆಯ ಕಲಹಗಳು, ಗೊಂದಲಗಳು ತಲೆದೋರತೊಡಗಿದ್ದವು. 4ನೆಯ ಗೋವಿಂದ ವೆಂಗಿಯ ಇಮ್ಮಡಿ ಯುದ್ಧಮಲ್ಲನಿಗೆ ಆತನ ವಿರೋಧಿಗಳಿಗೆ ಪ್ರತಿಯಾಗಿ ನೆರವುನೀಡಿದ, ಇದನ್ನು ಒಂದು ಕಡೆ ಹಿರಿಯ ಶಾಖೆಯ 2ನೆಯ ಭೀಮ ಗೋವಿಂದ ವಿರೋಧಿಗಳ ಒತ್ತಾಸೆಯೊಡನೆ ಪ್ರತಿಭಟಿಸಿದರೆ, ಅದರ ಬೆನ್ನಿಗೇ ಇನ್ನೊಂದು ಕಡೆ ಮುದುಗೊಂಡ ಚಾಲುಕ್ಯಶಾಖೆಯ (ವೇಮುಲವಾಡದ ಸೀಮೆಗೆ ಸೇರಿದಂತೆ ಸ್ವಲ್ಪ ದಕ್ಷಿಣದಲ್ಲಿದ್ದ ಪ್ರದೇಶವನ್ನು ಆಳುತ್ತಿದ್ದ ಚಾಲುಕ್ಯರು) ಬಿಜ್ಜ ಅಥವಾ ವಿಜಯಾದಿತ್ಯ  ಮೇ¯ದ್ದು ಪ್ರತಿಭಟಿಸಿದ. ಈ ಮೊದಲು ಭೀಮನ ದಂಗೆಯನ್ನಡಗಿಸಲು ಗೋವಿಂದ ಸಾಮಂತರ ಕೈಕೆಳಗೆ ಸೇನೆಯೊಂದನ್ನು  ಅಟ್ಟಿದ್ದ  ಹಾಗಯೇ ಈಗ ಇನ್ನೊಂದು ಸೇನೆಯನ್ನು ಬಿಜ್ಜನ ಮೇಲೆ ಕಳುಹಿಸಿದ, ಈಘಟ್ಟದಲ್ಲಿ ಬಿಜ್ಜ ಅರಿಕೇಸರಿಯ ನೆರವನ್ನು ಕೋರಿದ. ಅರಿಕೇಸರಿ ಬಿಜ್ಜನಿಗೆ ಸಹಾಯವಾಗಿ ಗೋವಿಂದನ ಸೈನ್ಯವನ್ನು ಸೋಲಿಸಿ ಓಡಿಸಿ, ಶರಣಾಗತ ಜಳನಿಧಿ, ಸಾಮಂತ ಚೂಡಾಮಣಿ ಎನ್ನಿಸಿದ, (ಚಾಲುಕ್ಯ ರಾಜ್ಯದಲ್ಲಿ ಅರಸೊತ್ತಿಗೆಗಾಗಿ ಮೇಲಾಟ ಹೋರಾಟಗಳು ನಡೆದಿದ್ದಾಗ ಕೊಲ್ಲಭಿಗಂಡ ವಿಜಯಾದಿತ್ಯನೆಂಬವ ಬದ್ದೆಗ ಅರಿಕೇಸರಿಗಳಿಗೆ ಶರಣಾಗತನಾಗಿರಬೇಕೆಂದು ಮುಂತಾಗಿ ಬೇರೆ ರೀತಿಯಲ್ಲಿ ಈ ಪ್ರಸಂಗವನ್ನು ವಿವರಿಸಿರುತ್ತಾರೆ.

ಅರಿಕೇಸರಿ ಮಿತಿಮೀರಿ ನಡೆಯುತ್ತಿದ್ದ ಚಕ್ರವರ್ತಿ ಗೋವಿಂದನನ್ನು ಕೆಡಿಸಿ ತನ್ನನ್ನು ನಂಬಿ ಬದ್ದೆಗದೇವನಿಗೆ ಸಾಮ್ರಾಜ್ಯಪದವನ್ನು ಕೈಗೂಡಿಸಿದನೆಂದು ಪಂಪಭಾರತದಲ್ಲಿ ಹೇಳಿದೆ. ಇದು ಎರಡನೆಯ ಸಾಹಸಕಾರ್ಯ. ಇದರ ಬಗೆಗೆ ಚರಿತ್ರಕಾರರ ವಿವರಣೆಯಿದು; ರಾಷ್ಟ್ರಕೂಟ ಚಕ್ರವರ್ತಿ 4ನೆಯ ಗೋವಿಂದ ತನ್ನ ಅಣ್ಣ ಇಮ್ಮಡಿ ಅಮೋಘವರ್ಷನ್ನು ಪದಚ್ಯುತಿಗೊಳಿಸಿ ರಾಷ್ಟ್ರಕೂಟ ಸಿಂಹಾಸನವನ್ನು ಹಿಡಿದಿದ್ದ (ಸು.930). ಇದು ಆತನ ಕೆಲವು ಆಸ್ಥಾನಿಕರಿಗೆ, ಮಂತ್ರಿ ಸಾಮಂತರಿಗೆ ಇಷ್ಟವಾಗಿರಲಿಲ್ಲ. ಇವರಿಗೆ  ರಾಜಕುಂಟುಂಬದಲ್ಲಿಯೇ ಗೋವಿಂದನ ಚಿಕ್ಕಪ್ಪನಾದ ಬದ್ದೆಗದನಿಂದಲೂ ಆತನ ಪುತ್ರ ಮುಮ್ಮುಡಿ ಕೃಷ್ಣನಿಂದಲೂ ಒತ್ತಾಸೆ ದೊರೆಯಿತು. ಗೋವಿಂದ ಇಂಥವರನ್ನು ಹೊರಹಾಕಿದಾಗ ಅವರೂ ಬದ್ದೆಗನ ಪತ್ನಿಯ (ಚೇರಿಯ ರಾಜಕುಮಾರಿ. ಒಂದನೆಯ ಯುವರಾಜದೇವನ ಪುತ್ರಿ) ತವರುರಾಜ್ಯವಾದ ತ್ರಿಪುರಿಗೆ ತೆರಳಿ ಚೇದಿಯ ಆಸ್ಥಾನವನ್ನು ಸೇರಿಕೊಂಡರು. ಅಲ್ಲಿಂದಲೇ ಅವರು ಗೋವಿಂದನ ಪುತಿಯಾಗಿ ಕುಟಿಲೋಪಾಯಗಳನ್ನು ಜರುಗಿಸುತ್ತಿದ್ದ ಹಾಗೆ ತೋರುತ್ತದೆ. ಇತ್ತ ಗೋವಿಂದನಾದರೋ ಪ್ರಜಾನುರಾಗವನ್ನುಗಳಿಸಲು ಏನೊಂದು ಮಾಡಲಿಲ್ಲ. ಆತ ವ್ಯಸನಾಸಕ್ತನಾಗಿದ್ದುದರಿಂದ  ಪ್ರಜೆಗಳಿಗೂ ಕೂಡ ಆತನ ಆಳ್ವಿಕೆ ಬೇಸರವನ್ನು ತಂದಿತ್ತು; ರಾಜ್ಯ ಸೂತ್ರಗಳು ಸಡಿಲವಾಗುತ್ತಿದ್ದುವು. ತನಗೆ ಗೋವಿಂದ ಭಾವಮೈದುನನೇ ಆದರೂ, ಅರಿಕೇಸರಿ ಪ್ರಜಾಭಿಪ್ರಾಯವನ್ನು ಲಕ್ಷಿಸಿ ಅತನ ಹಗೆಗಳ ಕಡೆಯೇ ಸೇರಿಕೊಂಡು, ಪ್ರಜೆಗಳ ಗೌರವದರಗಳನ್ನು ಗಳಿಸಿದ್ದ ಬದ್ದೆಗನ ಆಶೋತ್ತರಗಳನ್ನೇ ಪೋಷಿಸಿದ ಹಾಗೆ ತೋರುತ್ತದೆ. ಬದ್ದೆಗನಿಗೆ ಆತನ ಅಳಿಯ ಗಂಗಬೂತಗನ ಬೆಂಬಲವೂ  ಇದ್ದಿತು. ಗೋವಿಂದ ಚಾಲುಕ್ಯವಂಶದ ಅರಸರ ಅರಸೊತ್ತಿಗೆಯ ಕಲಹದಲ್ಲಿ ಕೈಹಾಕಿ ಇಕ್ಕಟ್ಟಿಗೆ ಸಿಕ್ಕಿಕೊಂಡ, ಬಿಜ್ಜನ ವ್ಯವಹಾರದಲ್ಲಿ ಅತನ ಸೈನ್ಯ ಅರಿಕೇಸರಿಯಿಂದ ಸೋಲನ್ನು ಅನುಭವಿಸಿತು. ಈ ವಿದ್ಯಮಾನಗಳನ್ನೆಲ್ಲ ತ್ರಿಪುರಿಯಿಂದ ವೀಕ್ಷಿಸುತ್ತಿದ್ದ ಬದ್ದೆಗನಿಗೆ ಕರೆ ಹೋಯಿತು.  ಆತ ಅಲ್ಲಿಂದ ಬರುತ್ತಲೇ ಪ್ರಾಯಶಃ ವೇಮುಲವಾಡದಲ್ಲಿಯೆ ಆತನನ್ನು ರಾಷ್ಟ್ರಕೂಟ ಚಕ್ರವರ್ತಿಯೆಂದು ಘೋಷಿಸಲಾಯಿತು. ಅರಿಕೇಸರಿ ಗೋವಿಂದನನ್ನು ಪದಚ್ಯುತಿಗೊಳಿಸಿ ಆತನ ಸ್ಥಾನದಲ್ಲಿ ಬದ್ದೆಗಗೆ ಮುಮ್ಮಡಿ ಅಮೋಘವರ್ಷನನ್ನು ನಿಲ್ಲಿಸಿದ. ಇದು ಪ್ರಾಯಶಃ ನಡೆದದ್ದು 934-35ರಲ್ಲಿ.

ಮೂರನೆಯದಾಗಿ ಅರಿಕೇಸರಿ, ಮದ್ದಾನೆಯ ಸೈನದೊಡನೆ ಆಟೋಟದಿಂದ ಬಂದು ತನ್ನನ್ನಿದಿರಿಸಿದ ಕಕ್ಕಲನ ತಮ್ಮ ಶೂರನಾದ ಬಪ್ಪುವನೆಂಬುವನನ್ನು, ತಾನು ಒಂದೇ ಆನೆ ಮೇಲಿದ್ದುಕೊಂಡು ಓಡಿಸಿದನೆಂಬುದಾಗಿ ಪಂಪಭಾರತದಲ್ಲಿ ಹೇಳಿದೆ. ಈ ಪ್ರಕರಣವನ್ನು ಹೆಚ್ಚು ಸಮರ್ಪಕವಾಗಿ ವಿವರಿಸುವುದು ಅಶಕ್ಯವೆಂದು ಚರಿತ್ರಕಾರರ ಅಭಿಪ್ರಾಯ. ಕಕ್ಕಲನೆಂಬುವನು ಅಚಳಪುರದ ಅರಸನೆಂದೂ ಆತ ಬದ್ದೆಗನ ಮರಣಾನಂತರದಲ್ಲಿ ಗಂಗಬೂತುಗನಿಂದ ಹತನಾದನೆಂದು ಮುಂತಾಗಿ ಕೂಡಲೂರಿನ ಒಂದು ಶಾಸನದಲ್ಲಿದೆ. ಬದ್ದೆಗ ಅಳುತ್ತಿದ್ದಾಗಲೇ ದಂತಿಗ ಮತ್ತು ಬಪ್ಪುಗ ಎಂಬ ದುಷ್ಟರಿಬ್ಬರು ಆತನಿಗೆ ಎದುರುಬಿದ್ದು 3ನೆಯ ಕೃಷ್ಣನಿಂದ ನಾಶವಾದರೆಂದು ದೇವೋಳಿಯ ಒಂದು ಶಾಸನದಲ್ಲಿ (940)  ಹೇಳಿದೆ. ಈ ಬಪ್ಪುಗನೇ ಕಕ್ಕಲನ ತಮ್ಮನಾದ ಬಪ್ಪುವನಿರಬೇಕೆಂದು ಕೆಲವರು ಹೇಳುತ್ತಾರೆ. ಅಂತೂ ಈತ 940ರ ಮೊದಲಲ್ಲಿ ಎಂದೋ ಒಮ್ಮೆ ಅರಿಕೇಸರಿಗೆ ಎದುರು ಬಿದ್ದು ಆತನಿಂದ ಪರಾಜಿತನಾಗಿ ಓಡಿಹೋಗಿರಬೇಕು ಎಂದು ತಿಳಿಯುತ್ತದೆ.

ಅರಿಕೇಸರಿ ರಾಜಧಾನಿಯಾದ ವೇಮುಲವಾಢದಲ್ಲಿ ಸೂರ್ಯದೇವಾಲಯವೊಂದನ್ನು ಕಟ್ಟಿಸಿದ್ದ, ಆ ದೇವಾಲಯದಲ್ಲಿ ಪೂಜೆಗಾಗಿ ಬರುವವರ ಅಶನಾರ್ಥವಾಗಿ ಸತ್ರವೊಂದನ್ನು ಕಟ್ಟಿಸಲು  ಪೆದ್ದಣಾರ್ಯನೆಂಬುವನ ಕೋರಿಕೆಯಂತೆ 100 ನಿವರ್ತನಗಳ ಭೂಮಿಯನ್ನು ಉತ್ತರಾಯಣ ಪುಣ್ಯ ಸಂಕ್ರಾಂತಿ ದಿವಸದಲ್ಲಿ ದತ್ತಿಯಾಗಿ ಕೊಟ್ಟನೆಂಬುದಾಗಿಯೂ ಹಾಗೆಯೇ ಕುಡಿಯುವ ನೀರಿನಕೊಳವೊಂದನ್ನು ಕಟ್ಟಿಸಲು ಅಲ್ಲಿಯೆ ಎಂಟು ನಿವರ್ತನಗಳ ಭೂಮಿಯನ್ನು ದತ್ತಿಬಿಟ್ಟಂತೆಯೂ ವೇಮುಲವಾಡದ ಶಾಸನದಲ್ಲಿ ಹೇಳಿದೆ.

ಪಂಪ ಮಹಾಕವಿ ಅರಿಕೇಸರಿಯ ಆಸ್ಥಾನದಲ್ಲಿ ಕವಿಯಾಗಿದ್ದುದು ಪ್ರಸಿದ್ಧ ವಿಷಯ. ಅರಿಕೇಸರಿ ಪಂಪನನ್ನು ಸ್ನೇಹಾದರಪೂರ್ವಕವಾಗಿ ಆತ್ಮೀಯತೆಯಿಂದ ನೋಡಿಕೊಳ್ಳುತ್ತಿದ್ದನೆಂಬುದು. ಪಂಪ ಯುದ್ದವೀರನಾಗಿ ಅರಿಕೇಸರಿ ಕೈಕೊಂಡ  ಯುದ್ಧಪ್ರಸಂಗಗಳಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಂಡಿದ್ದನೆಂಬುದು ಇಲ್ಲಿ ನೆನೆಯತಕ್ಕದ್ದಾಗಿದೆ. ಆದಿಪುರಾಣವನ್ನು ಶ್ರೇಷ್ಠರೀತಿಯಿಂದ ರಚಿಸಿ ಪಖ್ಯಾತನಾಗಿದ್ದ ಪಂಪನನ್ನು ಅರಿಕೇಸರಿ ಪ್ರೀತಿಯಿಂದ ತನ್ನಲ್ಲಿಗೆ ಬರಮಾಡಿಕೊಂಡು ವಿಶೇಷವಾಗಿ ಸನ್ಮಾನಿಸಿ ತನ್ನ ವಿಖ್ಯಾತಿ ಲೋಕದಲ್ಲಿ ಸ್ಥಿರಗೊಳ್ಳುವ ಹಾಗೆ ಭಾರತವನ್ನು ಬರೆಯುವಂತೆ ಅತನನ್ನು ಕೋರಿದ. ಅರಿಕೇಸರಿ ಸಾಮಂತರಾಜನಾಗಿಯೂ ಅತಿ ಸಾಹಸಿಯೂ ಪ್ರಭಾವಶಾಲಿಯೂ ಆಗಿದ್ದ; ಗುಣವಂತನೂ ಸ್ನೇಹಪ್ರಿಯನೂ ಆಗಿದ್ದ. ತನ್ನ ಕಾಲದ ರಾಜಕೀಯ ಜೀವನದ ನೇತಾರನಾಗಿದ್ದ. ಆದ್ದರಿಂದ ಪಂಪಕವಿ ಅರಿಕೇಸರಿಯ ಆಶಯವನ್ನು ಈಡೇರಿಸಲು  ಒಪ್ಪಿಕೊಂಡಿದ್ದಲ್ಲದೆ ಅತನ್ನೇ ತನ್ನ ಮಹಾಕಾವ್ಯದ ಕಥಾನಾಯಕನನ್ನಾಗಿಟ್ಟುಕೊಂಡ. ಅರಿಕೇಸರಿ ಅರ್ಜುನರನ್ನು ಅಭೇದವಾಗಿ ಗಣಿಸಿದ. ಅರ್ಜುನನ ಹೆಸರು ವ್ಯಕ್ತಿತ್ವ ಶೌರ್ಯ ಪ್ರತಾಪಗಳು ಕಥೆಯಲ್ಲಿ ಬರುವ ಕಡೆಗಳಲ್ಲಿ ಅರಿಕೇಸರಿಯ ಹೆಸರು ಬಿರುದುಗಳು ವ್ಯಕ್ತಿತ್ವ ಶೌರ್ಯ ಪ್ರತಾಪಗಳನ್ನು ಯೋಜಿಸಿದ. ತತ್ಕಾಲೀನ ರಾಜಕೀಯವನ್ನು ಭಾರತ ಕಥೆಯೊಡನೆ ಸಾಧ್ಯವಿದ್ದಮಟ್ಟಿಗೆ  ಹೊಂದಿಸಿ ಅಪೂರ್ವ ರೀತಿಯಲ್ಲಿ  ವಿಕ್ರಮಾರ್ಜುನ ವಿಜಯವೆಂಬ 'ಸಮಸ್ತ ಭಾರತವನ್ನು ರಚಿಸಿದ. ಹೀಗೆ ರಚಿಸಿದ ಮೇಲೆ ಅರಕೇಸರಿ ಇನ್ನೂ ಅತಿಶಯವಾಗಿ ವಸ್ತ್ರವಿಭೂಷಣಾದಿಗಳಿಂದ ಪಂಪಕವಿಯನ್ನು ಸನ್ಮಾನಿಸಿ ಕೀರ್ತಿಸಿ ಸಬ್ಬಿಸಾಸಿರದಲ್ಲಿ ಧರ್ಮಪುರವೆಂಬ ಅಗ್ರಹಾರವನ್ನು ಆತನಿಗೆ ಶಾಸನ ಹಾಕಿಸಿಕೊಟ್ಟ. ಸಬ್ಬಿನಾಡು ಎಂಬುದು ಇಂದಿನ ಆಂಧ್ರಪ್ರದೇಶದ ಕರೀಂನಗರ ಜಿಲ್ಲೆ ಎಂಬುದುದಾಗಿಯೂ ಆ ಜಿಲ್ಲೆಯಲ್ಲಿಯೇ ಈಗ 2-3 ಧರ್ಮವುರಗಳಿರುವುದರಿಂದ ಇವುಗಳಲ್ಲಿ ಯಾವುದೊ ಒಂದು ಪಂಪನಿಗೆ ಅರಿಕೇಸರಿ ಕೊಟ್ಟ ಶಾಸನದ ಅಗ್ರಹಾರವಾದ ಧರ್ಮವುರವಿರಬೇಕೆಂಬುದಾಗಿಯೂ ಚರಿತ್ರಕಾರು ಅಭಿಪ್ರಾಯಪಡುತ್ತಾರೆ.					
(ಟಿ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ